ಸೋಮವಾರ, ಏಪ್ರಿಲ್ 18, 2011

ಭಾರತದ ಪ್ರತಿ ಗ್ರಾಮಕ್ಕೂ ಬೇಕು ಅಣ್ಣಾ ಹಜಾರೆ

ಇಂದಿನ ನಮ್ಮ ಯುವ ಪೀಳಿಗೆಗೆ ಸ್ವತಂತ್ರ ಪೂರ್ವ ಭಾರತವೆಂದರೆ ಮಹಾತ್ಮಾ ಗಾಂಧೀಜಿ, ಸುಭಾಷ್ ಚಂದ್ರ ಭೋಸ್, ಭಗತ್ ಸಿಂಗ್, ಚಂದ್ರಶೇಖರ್ ಅಜಾದ್, ಸ್ವಾಮಿ ವಿವೇಕಾನಂದ ರಂತಹ ಮಹನೀಯರು ಕಲ್ಪನೆಗೆ ಬರುತ್ತಾರೆ,
ಅವರ ತ್ಯಾಗ, ಬಲಿದಾನಗಳು ನೆನಪಿಗೆ ಬರುತ್ತವೆ, ಅವರು ಕಂಡ ರಾಮರಾಜ್ಯದ ಕನಸು ನೆನಪಿಗೆ ಬರುತ್ತದೆ. ಗಾಂಧೀಜಿ ಯವರ ಶಾಂತಿ ಹಾಗು ಸರಳತೆಯ ಮಂತ್ರ , ಸುಭಾಷ್ ಚಂದ್ರ ಭೋಸ್ ಅವರ ಪೂರ್ಣ ಸ್ವರಾಜ್ಯದ ಕಲ್ಪನೆ, ಭಗತ್ ಸಿಂಗ್ ಅವರ ಕ್ರಾಂತಿಕಾರಿ ತತ್ತ್ವ, ಚಂದ್ರ ಶೇಖರ್ ಅಜಾದ್ ಅವರ ಶೌರ್ಯ ಪರಾಕ್ರಮ, ಸ್ವಾಮಿ ವಿವೇಕಾನಂದರ ಆಧ್ಯಾತ್ಮಿಕ ಕ್ರಾಂತಿ ಇವುಗಳೆಲ್ಲ ನಮ್ಮ ಕಲ್ಪನೆಯ ಲಹರಿಗಳಲ್ಲಿ ಹರಿದುಹೊಗುತ್ತವೆ.

ಆದರೆ, ಇಲ್ಲಿ ಒಂದು ವೈಚಿತ್ರ್ಯವೆಂದರೆ ಈ ಅರಿವು ಈಗಿನ ಎಲ್ಲ ಯುವ ಪೀಳಿಗೆಯಲ್ಲಿ ಇಲ್ಲ. ಅರಿವು ಇರುವವರೆಲ್ಲ ಇದನ್ನು ಪಾಲಿಸುತ್ತಾರೆ ಅಂತಲ್ಲ. ಪಾಲಿಸಬೇಕೆನ್ನುವವರೆಲ್ಲರೂ ಸಮಾಜಕ್ಕೆ ಉಪಕಾರಿಯಾಗಿದ್ದಾರೆ ಅಂತ ಏನಿಲ್ಲ.
ಯಾಕೆ ಹೀಗೆ? ಇಂದಿನ ಯುವಪೀಳಿಗೆಯಾದಂತಹ ನಮ್ಮನ್ನು ನಾವು ಸ್ವತಹ ಪ್ರಶ್ನಿಸಿಕೊಳ್ಳಬೇಕಾಗಿದೆ. ಸಮಾಜಕ್ಕಾಗಿ ಏಕಾಂಗಿಯಾಗಿ ಹೋರಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕಾಗಿದೆ.

ಸ್ವಾತಂತ್ರ್ಯ ಪೂರ್ವ ಭಾರತದ ಜನರ ಮಧ್ಯೆ ಸಾಮರಸ್ಯವಿತ್ತು, ನಮ್ಮ ಜನ ನಮ್ಮ ದೇಶವೆಂಬ ಭಾವನೆಯಿತ್ತು, ದೇಶಕ್ಕಾಗಿ ಏನಾದರೂ ಮಾಡಿ ಮಡಿಯಬೇಕು ಎನ್ನುವ ಛಲವಿತ್ತು, ಹಿಂದೂ-ಮುಸ್ಲಿಂ-ಸಿಖ್-ಇಸಾಯಿ ಎಂಬ ಬೇಧವಿಲ್ಲದ ಭ್ರಾತೃತ್ತ್ವವಿತ್ತು.
ನೆನಪಿರಲಿ, ಅಲ್ಲಿ ಸ್ವಪ್ರತಿಷ್ಥೆ, ಸ್ವಜನ ಪಕ್ಷಪಾತ, ಸ್ವಂತಕ್ಕಾಗಿ ಲಾಭವೆಂಬ ಕೀಳು ಯೋಚನೆಯಿರಲಿಲ್ಲ. ಬಡತನವಿದ್ದರೂ ಹಂಚಿ ತಿನ್ನಬೇಕೆಂಬ ಸದ್ಭಾವನೆಯಿತ್ತು, ಬಡವ-ಬಲ್ಲಿದ ನೆಂಬ ಅಹಂ ಇಲ್ಲದೆ ಎಲ್ಲರಲ್ಲೂ ಬೆರೆಯುವ ಮನಸ್ಸಿತ್ತು. ಇದ್ಯಲ್ಲ ಹೇಗೆ ಸಾಧ್ಯವಾಯಿತು? ಮೊಘಲರ ಆಕ್ರಮಣ, ದಬ್ಬಾಳಿಕೆ, ಜಾತಿ ಪದ್ಧತಿ, ಸತಿ ಪದ್ಧತಿ, ಎಂಬ ಸಾಮಾಜಿಕ ಪಿಡುಗುಗಳಿಂದ ಹರಿದು ಹಂಚಿ ಹೋದ ರಾಷ್ಟ್ರವಾಗಿದ್ದ ಭಾರತದಲ್ಲಿ ಈ ತರಹದ ಕ್ರಾಂತಿ ಹಾಗೂ ಬದಲಾವಣೆಗೆ ಕಾರಣಗಳೇನು ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತ ಹೋದರೆ ಭಾರತದ ಸಾರ್ವಭಾವ್ ಮತೆಗಾಗಿ, ಏಕಿಕರಣಕ್ಕಾಗಿ, ಏಕತೆಗಾಗಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಲೋಕ ನಾಯಕರು ನೆನಪಿಗೆ ಬರುತ್ತಾರೆ. ಅಂತಹ ನಾಯಕರ ಕನಸು ರಾಮರಾಜ್ಯವಾಗಿತ್ತು. ಮೋಸ, ದಬ್ಬಾಳಿಕೆ, ಭ್ರಷ್ಟತನ ಮುಕ್ತ ಭಾರತದ ಪರಿಕಲ್ಪನೆಯಾಗಿತ್ತು. ಜಗತ್ತಿಗೆ ಮಾದರಿ ರಾಷ್ಟ್ರವಾಗಿಸೋ ಕನಸ್ಸಿತ್ತು. ಅವರ ಪರಿಶ್ರಮ, ಹೋರಾಟದಿಂದ ಭಾರತ ಗುಲಾಮಗಿರಿಯಿಂದ ಮುಕ್ತಿಪಡೆಯಿತು. ಆದರೆ ದುರದ್ದೃಷ್ಟವಶಾತ್ ಸ್ವಾತಂತ್ರ್ಯದ ನಂತರ ಇಂತಹ ಒಬ್ಬರೇ ಒಬ್ಬ ಮಹಾನ್ ನಾಯಕರು ಈ ದೇಶವನ್ನು ಮುನ್ನಡೆಸಲು ಬದುಕುಳಿಯಲಿಲ್ಲ. ಅವರ ಕಲ್ಪನೆಯ ಭಾರತವನ್ನು ಮುನ್ನಡೆಸಲು ಆ ಯಮದೇವ ಅವರಿಗೆ ಅವಕಾಶಕೊಡಲಿಲ್ಲ.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದೇ ನಡುರಾತ್ರಿಯಲ್ಲಿ, ಅದೂ ಮಧ್ಯರಾತ್ರಿಯಲ್ಲಿ. ಹೀಗಾಗಿ ಜನರ ಅಂಧಕಾರಕ್ಕೆ ಕೊನೆ ಬರಲೇಯಿಲ್ಲ. ಸ್ವಾತಂತ್ರ್ಯಗೊಂಡ ನಂತರ ಜನರು ಮೂಗುದಾನಿ ಬಿಚ್ಚಿದ ಹೋರಿಯಂತಾದರು, ಯಾರೂ ಕೇಳದ ಯಡಬಿಡಂಗಿಯಂಥಾದರು, ದಾರಿ ತಪ್ಪಿದ ಮಗನಂತಾದರು, ನಾಯಕನಿಲ್ಲದ ನಾವಿಕನಂತಾದರು. ದೇಶಕ್ಕಾಗಿ ಒಂದು ದಿನವೂ ಪರಿಶ್ರಮ ಪಡದಂತಹ, ಐಶಾರಮಿ ವಿಲಾಸಿ ಜೀವನ ನಡೆಸಿದಂತಹ ವ್ಯಕ್ತಿಗಳು ದೇಶದ ಅಧಿಕಾರದ ಗದ್ದುಗೆ ಹಿಡಿದರು.

೧೯೪೭ ಆಗಸ್ಟ್ ೧೫ ರಂದು ನಮ್ಮ ದೇಶ ಬ್ರಿಟೀಷರಿಂದ ದಾಸ್ಯಮುಕ್ತವಾಯಿತು. ಸಮಾಜದ ದುರ್ಭಲ ವರ್ಗದವರನ್ನು ಮೇಲೆತ್ತುವುದೇ ಸ್ವಾತಂತ್ರ್ಯಾನಂತರ ಮೊದಲ ಆದ್ಯತೆಯಾಗಿತ್ತು, ಅವರನ್ನು ಮುಖ್ಯವಾಹಿನಿಗೆ ತರುವ ಅಗತ್ತ್ಯವಿತ್ತು. ಈ ಅಗತ್ಯಕ್ಕನುಗುಣವಾಗಿ ಭಾರತದ ಸಂವಿಧಾನದ ಕರ್ತೃ ಶ್ರೀ ಬಿ ಆರ್ ಅಂಬೇಡ್ಕರ್ರವರು ಈ ವರ್ಗಕ್ಕೆ ಮೀಸಲಾತಿಯನ್ನು ಜಾರಿಗೆ ತಂದರು. ಈ ನೀತಿ ಮುಂದೆ ಹೋಗಿ ಸಮಾಜದ ದುರ್ಭಲ ವರ್ಗದ ಜನರನ್ನು ಮುಖ್ಯ ಶ್ರೇಣಿಗೆ ತರಬೇಕೆನ್ನುವ ಸದುದ್ದೇಶ ಈಡೇರಿತು ಎನ್ನುವುದು ಈಗ ಇತಿಹಾಸ. ಇಂತಹ ಅಪರಿಮಿತ ದೂರದೃಷ್ಟಿ, ಭಾರತದ ಮಿಕ್ಕ ಕಾನೂನು ತಜ್ಞ್ಯರಲ್ಲಿ ಕಾಣಸಿಗಲಿಲ್ಲ. ಅದರ ಪರಿಣಾಮ ದೇಶದ ಮಿಕ್ಕ ಕಾನೂನುಗಳು ಸಪ್ಪೆಯಾಗಿ ಜಾರಿಯಾದವು. ಇದರಿಂದ ಅಧಿಕಾರಶಾಹಿ ಸರಕಾರಗಳು ಅಸ್ತಿತ್ತ್ವಕ್ಕೆ ಬಂದವು. ಲಾಲ್ ಬಹಾದ್ದೂರ್ ಶಾಸ್ತ್ರೀ ಯವರ ಅಧಿಕಾರದ ನಂತರ ಅಟಲ್ ಬಿಹಾರಿ ವಾಜಪೇಯಿಯವರ ಸರ್ಕಾರದವರೆಗೆ ಯಾವ ಸರ್ಕಾರವೂ ಜನಪರ ಸರ್ಕಾರ ಕೊಡಲು ವಿಫಲವಾದವು. ಈ ಅವಧಿಯಲ್ಲಿ ದೇಶದಲ್ಲಿ ಅರಾಜಕತೆ (೧೯೭೫ ರಲ್ಲಿ ಪ್ರಧಾನಿ ಇಂದಿರಾ ಗಾಂಧೀಜಿಯವರಿಂದ ತುರ್ತು ಪರಿಸ್ಥಿತಿ ಘೋಷಣೆ), ಅಸ್ಥಿರತೆ (೧೯೯೦ ರಲ್ಲಿ ಪ್ರಧಾನಿ ಚಂದ್ರ ಶೇಖರ್ ರವರ ಸಮಯದಲ್ಲಿ ದೇಶ ಸಾಲದಿಂದ ಮತ್ತೆ ಗುಲಾಮಗಿರಿಯತ್ತ ಸಾಗಿದ್ದು) , ಬ್ರಷ್ಟತನ (೧೯೯೧ ರ ಪ್ರಧಾನಿ ಪಿ ವಿ ನರಸಿಂಹರಾವ್ ಸಮಯದಲ್ಲಿ ಬೋಫೋರ್ಸ್ ನಂತಹ ನೂರಾರು ಕೋಟಿಯ ಹಗರಣ ಬೆಳಕಿಗೆ ಬಂದಿದ್ದು), ರಬ್ಬರ್ ಸ್ಟಾಂಪ್ ಸರ್ಕಾರ (೧೯೯೬ ರಲ್ಲಿ ಕಾಂಗ್ರೆಸ್ ಬೆಂಬಲಿತ ಹಲ್ಲಿಲ್ಲದ ದೇವೇಗೌಡ ನೇತೃತ್ವದ ಸಂಯುಕ್ತ ರಂಗ ಸರ್ಕಾರ) ಯುಗವೇ ಬಂದು ಹೋಯಿತು. ಈ ಅವಧಿಯಲ್ಲಿ ಒಬೀರಾಯ ಕಾಲದ ಸಮಯಕ್ಕನುಗುಣವಾಗಿ, ಪರಿಷ್ಕ್ರತವಾಗದ ಭಾರತದ ಸಂವಿಧಾನದ ಕಾಯಿದೆಗಳ ಲೋಪಗಳನ್ನ ಬಳಸಿಕೊಂಡು ನಾಯಿಕೊಡೆಯಂತೆ ರಾಜಕೀಯ ಪಕ್ಷಗಳು ಬೆಳೆದವು. ಇದರಿಂದ ಪ್ರತಿಯೊಂದು ಪಕ್ಷಗಳು ಹಣಬಲದಿಂದ, ತೋಳ್ಬಲದಿಂದ ಅಧಿಕಾರ ಪಡೆಯುವುದಕ್ಕಾಗಿ ಹಾತೊರೆಯತೊಡಗಿದವು, ಇದರ ಪರಿಣಾಮ ದೇಶದ ರಾಜಕೀಯ, ಒಂದು ದೊಡ್ಡ ಅವ್ಯವಹಾರದ ಸಾಧನವಾಗಿ ಹೋಯಿತು.ಈ ಅವ್ಯವಹಾರದಲ್ಲಿ(ಅಧಿಕಾರದಲ್ಲಿ) ಉಳಿಯಲು ದೇಶದ ಸಂಪತ್ತಿನ, ಖಜಾನೆಯ ಲೂಟಿ ಶುರುವಾಯಿತು. ಸಂವಿಧಾನದ ಕಾಯ್ದೆಯ ಲೋಪಗಳಿಂದ ಜನರಿಗೆ ಈ ಬ್ರಷ್ಟಾಚಾರಿಗಳನ್ನು ಹದುಬಸ್ತಿನಲ್ಲಿಡಲಾಗಲಿಲ್ಲ .

ಒಂದು ಚುನಾವಣಾ ಕ್ಷೇತ್ರದಲ್ಲಿ ೫೦ ಪ್ರತಿಶತಕ್ಕಿಂತ ಕಡಿಮೆ ಮತಗಳು ನೋಂದಾವಣೆಯಾದರೆ ಅದರ ಅರ್ಥ ಜನರಿಗೆ ಯಾವ ಅಭ್ಯರ್ಥಿಗಳಲ್ಲೂ ನಂಬಿಕೆಯಿಲ್ಲ, ಜನರಿಗೆ ಈ ಅಭ್ಯರ್ಥಿಗಳಿಂದ ಆ ಕ್ಷೇತ್ರದ ಅಭಿವೃದ್ಧಿಯ ನಂಬಿಕೆಯಿಲ್ಲ ಎಂದರ್ಥ.
ಹೀಗಾಗಿ ಆ ಕ್ಷೇತ್ರವನ್ನು ಅತಂತ್ರ ಎಂದು ಘೋಷಿಸಿ ಮತ್ತೆ ಚುನಾವಣಾ ಘೋಷಣೆ ಮಾಡಿ ಅಥವಾ ಸಮಾಜ ಒಪ್ಪುವಂತಹ ವ್ಯಕ್ತಿಯನ್ನು ಆ ಕ್ಷೇತ್ರಕ್ಕೆ ಪ್ರತಿನಿಧಿಯನ್ನಾಗಿಸುವ ಕಾಯ್ದೆಯಲ್ಲಿ ತಿದ್ದುಪಡಿ ತರುವ ಅಗತ್ಯವಾಗುತ್ತದೆ. ಆದರೆ ಅದು ಕಳೆದ ೬೦ ವರ್ಷಗಳಲ್ಲಿ ಆಗಲಿಲ್ಲ. ಚಲಾವಣೆಯಾದ ಮತಗಳಲ್ಲಿಯೇ ಹೆಚ್ಚು ಮತಗಳನ್ನು ಪಡೆದ ಅಭ್ಯರ್ಥಿಯನ್ನು ವಿಜೇತ ಎಂದು ಘೋಷಿಸಲಾಗುತ್ತದೆ. ಹೀಗಾಗಿ ಬ್ರಷ್ಟಾಚಾರ ವೃದ್ಧಿಸಲು ಇದೂ ಒಂದು ಮುಖ್ಯ ಕಾರಣವಾಗುತ್ತದೆ.

ಇದಕ್ಕೆಲ್ಲ ಮೂಲ ನಮ್ಮ ಅಧಿಕಾರ ವ್ಯವಸ್ಥೆ. ಅಧಿಕಾರವೆಂಬುದು ಜನಸಾಮಾನ್ಯನಿಗೆ ತಲುಪದೇ ಕೇಂದ್ರಿತವಾಗಿ ಅಧಿಕಾರಶಾಹಿಗಳ ಹಿಡಿತದಲ್ಲಿರುವುದು. ಅದಕ್ಕೆಲ್ಲ ಪುಷ್ಥಿ ನೀಡುವಂತೆ ಬೋಫೋರ್ಸ್, ಮೇವು, ತೆಹೆಲ್ಕಾ, ಕಾಮನ್ವೆಲ್ತ್, ಎಸ್ಸ್-ಬ್ಯಾಂಡ್, ೨ ಜಿ ಸ್ಪೆಕ್ಟ್ರಂ ಹಗರಣಗಳು ಸಾಲು ಸಾಲಾಗಿ ಬಂದು ನಮ್ಮ ದೇಶವನ್ನೇ ಕೊಳ್ಳೆ ಹೊಡೆದವು. ಈ ಹಗರಣಗಳು ದೇಶದ ಜನಸಾಮಾನ್ಯರನ್ನು ಚಿಂತೆಗೀಡು ಮಾಡಿದವು. ತೆರಿಗೆದಾರನ ನಿದ್ದೆ ಕೆಡಿಸಿದವು.

ದೇಶದ ಜನರ ನಿತ್ಯ ಹೋರಾಟದ ಫಲವಾಗಿ ಮಾಹಿತಿ ಹಕ್ಕು ಕಾಯಿದೆಯನ್ನು(Right To Information Act 2005, RTI) ಭಾರತ ಸರ್ಕಾರವು ಜೂನ್ ೧೫, ೨೦೦೫ ರಂದು ಸಂಸತ್ತಿನಲ್ಲಿ ಅಂಗೀಕರಿಸಿತು. ಈ ಕಾಯ್ದೆಯು ದೇಶದ ಯಾವುದೇ ಪ್ರಜೆ ಯಾವುದೇ ಸರ್ಕಾರಿ ಆಯ-ವ್ಯಯದ ಮಾಹಿತಿ ಪಡೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಕಾಯ್ದೆ ಜಾರಿಯಿಂದಲೇ ಅದ್ಯಷ್ಟೋ ಹಗರಣಗಳು ಬೆಳಕಿಗೆ ಬಂದವು.

ಎಷ್ಟೋ ಹಗರಣಗಳು ಬೆಳಕಿಗೆ ಬಂದರೂ ಅಪರಾಧಿಗಳನ್ನು ಶಿಕ್ಷಿಸುವಂತಹ ಕಾನೂನುಗಳು ನಮ್ಮ ಸಂವಿಧಾನದಲ್ಲಿಲ್ಲ. ಅವುಗಳನ್ನು ತಡೆಯಲೆಂದೇ ಲೋಕ ಜನಪಾಲ್ ಕಾಯ್ದೆ ೧೯೬೯ ರಲ್ಲಿ ಜಾರಿಗೆ ಬಂದಿತು.ಈ ಕಾಯ್ದೆಯ ಪ್ರಕಾರ ನಮ್ಮಲ್ಲಿರುವ ಅಪರಾಧ, ಬ್ರಷ್ಟಾಚಾರ ತಡೆಯಲು ಸ್ಥಾಪಿಸಿದ ಸಿ ಬಿ ಆಯ (CBI), ಲೋಕಾಯುಕ್ತದಂಥ ಸಂಸ್ಥೆಗಳು ಹಲ್ಲಿಲ್ಲದಂತಹ ಹುಲಿಗಲಾಗಿವೆ. ಅವುಗಳಲ್ಲಿರುವ ಲೋಪಗಳನ್ನು ಸರಿಯಾಗಿಸಲೆಂದೇ ಈ ಕಾಯ್ದೆಗೆ ಇಲ್ಲಿಯವರೆಗೆ (೨೦೦೮ ರ ವರೆಗೆ ) ಒಟ್ಟು ಒಂಭತ್ತು ತಿದ್ದುಪಡಿಗಳನ್ನು ಶಿಫಾರಸು ಮಾಡಲಾಯಿತು (೧೯೭೧, ೧೯೭೭, ೧೯೮೫, ೧೯೮೯, ೧೯೯೬, ೧೯೯೮, ೨೦೦೧, ೨೦೦೫, ೨೦೦೮). ಈ ತಿದ್ದುಪಡಿಗಳುಳ್ಳ ಕಾಯ್ದೆಯೇ ಜನ- ಲೋಕ ಪಾಲ್ ಕಾಯ್ದೆ. ಆದರೆ ಇಲ್ಲಿಯವರೆಗೆ ಯಾವುದೇ ಸರ್ಕಾರವೂ ಇವುಗಲ್ಲಿ ಒಂದನ್ನೂ ಅಂಗೀಕರಿಸದೆ ತಮ್ಮ ಬ್ರಷ್ಟ ಮುಖ ಪ್ರದರ್ಶಿಸಿದವು. ಆದರೆ ಈ ಕಾಯ್ದೆ ಜಾರಿಗೆ ಅನೇಕ ಮಹಾನ್ ಸಮಾಜ ಸುಧಾರಣೆಯ ಹರಿಕಾರರಾದಂತಹ ಅಣ್ಣಾ ಹಜಾರೆ, ಅರವಿಂದ್ ಕೇಜರಿವಾಲ್, ಕಿರಣ್ ಬೇಡಿ, ಸ್ವಾಮಿ ಅಗ್ನಿವೇಶ್ ರ ಮುಂದಾಳತ್ವದಲ್ಲಿ ಏಪ್ರಿಲ್ ೫, ೨೦೧೧ ರಂದು ಅಸಂಖ್ಯ ಭಾರತೀಯರ ಬೆಂಬಲದೊಂದಿಗೆ ದೆಹಲಿಯ ಜಂತರ್ ಮಂತರ್ ನಲ್ಲಿ ಆಮರಣಾಂತ ಉಪವಾಸ ಕೈಗೊಂಡರು. ಮೊದಮೊದಲು ಯು ಪಿ ಏ ಸರ್ಕಾರವು ತನ್ನ ಎಂದಿನ ಮೊಂಡುತನ ಪ್ರದರ್ಶಿಸಿದರೂ ಕೊನೆಗೆ ದೇಶದ ಅಸಂಖ್ಯ ನಾಗರಿಕರ ಆಶೋತ್ತರಗಳಿಗೆ ಮನ್ನಣೆಯಿತ್ತು ಮುಂಬರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ (ಆಗಸ್ಟ್ ೨೦೧೧) ಈ ಕಾಯ್ದೆಗೆ ಗೊತ್ತುವಳಿ ತರಲು ಒಪ್ಪಿಕೊಂಡಿತು. ೬೦ ವರ್ಷದ ಸ್ವತಂತ್ರ ಭಾರತದಲ್ಲಿ ಮೊದಲಬಾರಿಗೆ ಸಮಾಜದ ಎಲ್ಲ ವರ್ಗದವರು ಜೊತೆಗೂಡಿ ಈ ಹೋರಾಟದಲ್ಲಿ ಪಾಲ್ಗೊಂಡು ನಾವು ಭಾರತೀಯರು ಒಂದು ಎಂದು ಸಾಬೀತು ಪಡಿಸಿದರು. ಇದರಲ್ಲಿ ಭಾರತೀಯ ಮಾಧ್ಯಮದ ಪಾತ್ರವೂ ಅಷ್ಟೇ ಮುಖ್ಯವಾಗಿತ್ತು.

ಯಾರಿದು ಅಣ್ಣ ಹಜಾರೆ?
ಅಣ್ಣ ಹಜಾರೆ ಒಬ್ಬ ನಿವೃತ್ತ ಯೋಧ. ಆತ ೧೯೬೫ ರ ಭಾರತ-ಪಾಕ್ ಯುದ್ಧದಲ್ಲಿ ಪಾಲ್ಗೊಂಡಿದ್ದ. ಇವರ ಸಮಾಜಸೇವೆಗಾಗಿ ಇವರನ್ನು ಪದ್ಮ ಭೂಷಣ ಪ್ರಶಸ್ತಿಯಿಂದ ಸನ್ಮಾನಿಸಲಾಗಿದೆ.

ಆತನ ಬಗ್ಗೆ ವಿಶೇಷತೆ ಏನು?
ಆತ ಮಹಾರಾಷ್ಟ್ರ ರಾಜ್ಯದ ಅಹ್ಮದ್-ನಗರ್ ಹತ್ತಿರವಿರುವ ರಾಲೆಗಾಂವ್ ಸಿದ್ಧಿ ಎಂಬ ಪುಟ್ಟ ಗ್ರಾಮವನ್ನು ಒಂದು ಮಾದರಿ ಗ್ರಾಮವನ್ನಾಗಿ ಪರಿವರ್ತಿಸಿದ ಹರಿಕಾರ.
ಈ ಹಳ್ಳಿಯ ಎಲ್ಲ ಜನ ಇಂದು ಸ್ವಾವಲಂಬಿಗಳು. ಈ ಹಳ್ಳಿಯಲ್ಲಿ ಸೌರಶಕ್ತಿ, ಬಯೋ ಗ್ಯಾಸ್ ಬಳಸಿ ವಿದ್ಯುತ್ತನ್ನು ಉತ್ಪಾದಿಸಲಾಗುತ್ತದೆ. ಈ ಹಳ್ಳಿ ೧೯೭೫ ರಲ್ಲಿ ಒಂದು ಕುಗ್ರಾಮವಾಗಿತ್ತು.

ಅಣ್ಣ ಹಜಾರೆ ಹೋರಾಟ ನಡಿಸಿರುವುದು ಯಾತಕ್ಕೆ?
ಅಣ್ಣ ಹಜಾರೆ ಹೋರಾಟ ನಡೆಸಿರುವುದು ಜನ ಲೋಕ ಪಾಲ್ ಕಾಯ್ದೆ ಜಾರಿಗಾಗಿ. ಈ ಕಾಯ್ದೆ ಜಾರಿಗೆ ಬಂದರೆ ಒಂದು ಸ್ವಾಯತ್ತ ಸಂಸ್ಥೆ ಸ್ಥಾಪಿತವಾಗುತ್ತದೆ. ದೇಶದ ರಾಜಕಾರಣಿಗಳು, ಅಧಿಕಾರಿಗಳು (ಆಯ ಏ ಎಸ್ಸ್ / ಆಯ ಪಿ ಎಸ್ಸ್) ಮಾಡುವ ಹಗರಣಗಳು ಈ ಸಂಸ್ಥೆಯ ಅಡಿಯಲ್ಲಿ ಬಂದು ಅವರಿಗೆ ಶಿಕ್ಷೆ ಜಾರಿಯಾಗಲು ಅನುವಾಗುತ್ತದೆ.

ಈ ಹೋರಾಟಕ್ಕೆ ಸರ್ಕಾರ ಒಪ್ಪಿಕೊಳ್ಳುತ್ತಾ?
ಏಪ್ರಿಲ್ ೮ ೨೦೧೧ ರಂದು ಸರ್ಕಾರ ಈ ಒತ್ತಾಯಕ್ಕೆ ಮಣಿದು ಒಪ್ಪಿಗೆ ಸೂಚಿಸಿತು. ಅದರಂತೆ ಅಣ್ಣ ಹಜಾರೆಯವರು ತಮ್ಮ ಆಮರಣಾಂತ ಉಪವಾಸವನ್ನು ಕೈ ಬಿಟ್ಟರು.
ಈ ಕಾಯ್ದೆಯಂತೆ ಲೋಕ ಪಾಲ್ ಕಮೀಟಿಯಲ್ಲಿ ೧೦ ಜನರಿರುತ್ತಾರೆ. ಇದರಲ್ಲಿ ೫ ಜನ ಸರ್ಕಾರದ ಮಂತ್ರಿಗಳಿರುತ್ತಾರೆ, ೫ ಜನ ಸಮಾಜದ ಪ್ರತಿನಿಧಿಗಳಿರುತ್ತಾರೆ. ಈ ಕಮೀಟಿಗೆ ಪ್ರತೀ ಗುಂಪಿನಿಂದ ಒಬ್ಬರಂತೆ ಇಬ್ಬರು ಅಧ್ಯಕ್ಷರಿರುತ್ತಾರೆ.

ಈ ಕಾಯ್ದೆ ಜಾರಿಯಾದರೆ ಯಾವ ಬದಲಾವಣೆಯಾಗುತ್ತವೆ?
ಕೇಂದ್ರದಲ್ಲಿ ಒಬ್ಬ ಲೋಕ ಪಾಲ್ ನನ್ನು ನೇಮಿಸಲಾಗುತ್ತದೆ. ಭಾರತೀಯ ಚುನಾವಣ ಆಯುಕ್ತರಿಗೆ ಸ್ವತಂತ್ರ ಅಧಿಕಾರ ಇರುವಂತೆ ಈ ಲೋಕ ಪಾಲ್ ರಿಗೆ ಅಧಿಕಾರವಿರುತ್ತದೆ. ಪ್ರತಿ ರಾಜ್ಯದಲ್ಲೂ ಒಂದು ಲೋಕಾಯುಕ್ತನನ್ನು ನೇಮಿಸಲಾಗುತ್ತದೆ.
ಈ ಕಾಯ್ದೆಯನ್ವಯ ಬ್ರಷ್ಟಾಚಾರದ ತಪ್ಪಿತಸ್ತರನ್ನು ಒಂದು ವರ್ಷದಲ್ಲಿ ಮೊಕದ್ದಮೆಗೆ ಗುರಿಪಡಿಸಲಾಗುತ್ತದೆ. ಎರಡು ವರ್ಷದಲ್ಲಿ ತಪ್ಪಿತಸ್ಥರನ್ನು ಶಿಕ್ಷಿಸಲಾಗುತ್ತದೆ . ಬೋಫೋರ್ಸ್, ಭೋಪಾಲ್ ಅನಿಲ ದುರಂತ ದಂತೆ ೨೫ ವರ್ಷಗಳವರೆಗೆ ತನಿಖೆ ಕೈಗೊಂಡು ಯಾವುದೇ ಶಿಕ್ಷೆ ಯಾಗಲಿಲ್ಲ, ಆದರೆ ಈ ಕಾಯ್ದೆ ಅಂತಹ ತೊಡಕುಗಳನ್ನು ಮೆಟ್ಟಿ ನಿಲ್ಲುತ್ತದೆ.
--
ಈ ಕಾಯ್ದೆ ಜಾರಿಯಾದರೆ ನಮ್ಮ ದೇಶದಲ್ಲಿ ಹಾಂಗ್-ಕಾಂಗ್ ನಂತೆ ೯೫% ದವರೆಗೆ ಬ್ರಷ್ಟಾಚಾರ ನಿಲ್ಲತ್ತದೆ ಎಂದು ನಂಬಿದ್ದರೆ ಅದು ಅಸಾಧ್ಯವಾದ ಕನಸಾಗುತ್ತದೆ. ಆದರೆ ಈ ಕಾಯ್ದೆಯಿಂದ ಜನರ ಆಶೋತ್ತರಗಳು ಸಾಕಾರಗೊಳ್ಳಬೇಕಾದರೆ ಭಾರತದ ಪ್ರತಿಯೊಬ್ಬ ನಾಗರಿಕನಲ್ಲಿ ಇದರ ಬಗ್ಗೆ ಅರಿವು ಮೂಡಿಸುವುದು ನಮ್ಮ ಆಧ್ಯ ಕರ್ತವ್ಯ. ಇಂದು ದೇಶದಲ್ಲಿ ಹಳ್ಳಿಗೊಂದರಂತೆ ಅಣ್ಣ-ಹಜಾರೆಯಂಥ ಸಮಾಜ ಸೇವಕನ ಅವಶ್ಯಕತೆಯಿದೆ. ಪ್ರತಿಯೊಬ್ಬ ಭಾರತೀಯನಲ್ಲೂ ಆತ್ಮವಿಶ್ವಾಸ ಮೂಡಬೇಕಾಗಿದೆ.

ನಿಮಗೆ ಯಾರಾದರೂ ಲಂಚ ಕೇಳಿದರೆ ದಯವಿಟ್ಟು ಕೆಳಕಂಡ ಅಥವಾ ನಿಮಗೆ ಅನಿಸುವ ಹೊಸ ವಿಧಾನಗಳನ್ನು ಪಾಲಿಸಿ.
೧. ಲಂಚ ಕೇಳಿದವರನ್ನು ಜೋರಾಗಿ ಎಲ್ಲರಿಗೂ ಕೇಳಿಸುವಂತೆ 'ಈ ಕೆಲಸ ಮಾಡಿಕೊಡಲು ನಿಮಗೆ ಲಂಚ ಬೇಕಾ? ಎಷ್ಟು ಬೇಕು? ಏತಕ್ಕೆ ಬೇಕು? ನಿಮಗೆ ಸರ್ಕಾರ ಸಂಬಳವನ್ನು ಕೊಡುವುದಿಲ್ಲವೇ?' ಎಂದು ಕೇಳಿ.
೨. 'ಈ ಅಧಿಕಾರಿ ಲಂಚವಿಲ್ಲದೆ ಕೆಲಸ ಮಾಡುವುದಿಲ್ಲ' ಎಂಬ ಸ್ಟಿಕರನ್ನು ತಯ್ಯಾರಿಸಿ ಅಧಿಕಾರಿಯ ಆಫೀಸ್ ಗೋಡೆಗೆ ಅಂಟಿಸಿ.
೩. ಮೇಲಿನ ಅಧಿಕಾರಿಯನ್ನು ಸಂಪರ್ಕಿಸಿ ದೂರನ್ನು ಕೊಡಿ.
೪. ಸಮಾಜ ಸೇವಾ ಸಂಸ್ಥೆಯ ಸದಸ್ಯರಿಗೆ ದೂರನ್ನು ಕೊಟ್ಟು ಬ್ರಷ್ಟ ಅಧಿಕಾರಿಯ ವಿರುದ್ಧ ಹೋರಾಡಿ.
೫. ಈ ವೆಬ್ ತಾಣದಲ್ಲಿ ನಿಮ್ಮ ದೂರನ್ನು ಸಲ್ಲಿಸಿ

ಜೈ ಹಿಂದ್!

ನಿಮ್ಮ,
ಗುರುರಾಜ್ ದೇಸಾಯಿ

2 ಕಾಮೆಂಟ್‌ಗಳು:

  1. ತುಂಬಾ ಚೆನ್ನಾಗಿದೆ ಗುರು. ಹೀಗೆ ಬರೀತಾ ಇರು. ಒಳ್ಳೆಯ ವಿಷಯದ ಬಗ್ಗೆ ಚರ್ಚೆ ಮಾಡಿದ್ಡಿ. ಲಂಚದ ವಿರುದ್ದ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ್ ಇದೆ.

    ಪ್ರತ್ಯುತ್ತರಅಳಿಸಿ