ಮಂಗಳವಾರ, ನವೆಂಬರ್ 23, 2021

ಜವಾಬ್ದಾರಿ

ಪರೋಪಕಾರಿಯಾದರೇನು ಬಂತು
ನಿನ್ನ ನಂಬಿದವರು ನರಳುತಿರಲು 

ಸಂಸಾರ ಮಾಡಿ ಮಕ್ಕಳಾದರೇನು ಬಂತು
ನಿನಗಾಗದಿದ್ದರೆ ಅವರಿಗೆ ನೆಲೆ ಒದಗಿಸಲು 

ತೇರು ಏರಿದರೇನು ಬಂತು
ನಿನ್ನ ಬೇರು ಮರೆತಿರಲು 

ಊರಿಗೆ ನಾಯಕನೆನಿಸಿಕೊಂಡರೇನು ಬಂತು
ನಿನ್ನ ಮನೆಯ ತಳಹದಿ ಅಲುಗಾಡುತಿರಲು 

ಗಳಿಸಿ ದೊಡ್ಡವನೆನಿಸಿಕೊಂಡರೇನು ಬಂತು
ನಿನ್ನ ಪೂರ್ವಾಪರ ಮರೆತು ಅಹಂ ಹೆಚ್ಚಾಗಿರಲು 

ಏನೂ ಸಾಧಿಸದೆ ನನ್ನಿಂದಲೇ ಎಲ್ಲ ಎಂಬ ಜಂಬವಿದ್ದರೇನು ಬಂತು
ಹೊಸ ತಲೆಮಾರು ಪರಿಶ್ರಮಿಸಿ ಫಲ ಬೆಳೆಯುತಿರಲು 

-
ಗುರುರಾಜ್ - ವಚನ ಬ್ರಹ್ಮ 


ಬುಧವಾರ, ಅಕ್ಟೋಬರ್ 27, 2021

ತೂ ಮುಝೆ ವಟ್ಟ್ ಹೋನಾ !

ನಿನ್ನ ಕಂಡ ಕ್ಷಣವು, ಕುಡಿದಂತಾಯ್ತು ಹೆಂಡ !

ತೂ ಮುಝೆ ವಟ್ಟ್ ಹೋನಾ ! 

ಇಲ್ಲವೆಂದರೆ ನಾನಾಗುವೆನು ಭಂಡ !!


ನಿನ್ನ ಕಣ್ಣ ಸನ್ನೆಯೊಂದು, ಎದೆಯಲಿ ಮೂಡಿಸಿದಂತಾಯ್ತು ಕಾಮನ ಬಿಲ್ಲಿನ ಬಣ್ಣ !

ತೂ ಕ್ಯಾ ಭೀ ಕರ್ ಕು ಆನಾ ! 

ಇಲ್ಲವೆಂದರೆ ಚಿಂತೆಯಲಿ ಆಗುವೆನು ಸಣ್ಣ !!


ನಿನ್ನ ಒಪ್ಪಿಗೆಯ ಸೂಚನೆಯು, ಏರಿಸಿದಂತಾಯ್ತು  ಅಟ್ಟದ ಮೇಲಿನ ಉಪ್ಪರಿಗೆಗೆ !

ತೂ ಮೇರಾಚ್ ರೆಹನಾ ! 

ಇಲ್ಲವೆಂದರೆ ಕಣ್ಮರೆಯಾಗಿ  ಹೋಗುವೆನು ಗಪ್ಪಗೆ !!


ವಚನ ಬ್ರಹ್ಮ 

(ಗುರುರಾಜ ದೇಸಾಯಿ)






ಬುಧವಾರ, ಆಗಸ್ಟ್ 11, 2021

ನಿಸ್ವಾರ್ಥ ಹೃದಯಗಳು

ನನ್ನ ನಿನ್ನ ಭಾಷೆಗಳು ಬೇರೆಯಾದರೇನು 

ಕಣ್ಣುಗಳೇ ಮಾತನಾಡಲಿ ಅನುವಾದಕಗಳಾಗಿ 


ನಾನು ನೀನು ದೂರವಿದ್ದರೇನು 

ಹೃದಯಗಳೇ ಮಾತನಾಡಲಿ ದೂರವಾಣಿಗಳಾಗಿ 


ನನಗೂ ನಿನಗೂ ಅಡೆತಡೆಗಳಿದ್ದರೇನು 

ಮನಸ್ಸುಗಳು ಮುನ್ನುಗ್ಗಲಿ ಸೈನಿಕರಾಗಿ 


ನನ್ನದು ನಿನ್ನದು ಅಂತಸ್ತಿನಲ್ಲಿ ಅಂತರವಿದ್ದರೇನು 

ನಮ್ಮಿಬ್ಬರ ಪ್ರೀತಿ ಜಯಿಸಲಿ ಶ್ರೀಮಂತವಾಗಿ 


-

ಗುರುರಾಜ ದೇಸಾಯಿ (ವಚನ ಭ್ರಹ್ಮ)

ಮುಖವಾಡ (Mask)

ಮೊಗವು ನಿನ್ನ ಚರಿತ್ರೆಯ ಮುಖಪುಟವಾದರೆ, ಆ ಕಣ್ಣುಗಳೇ ಶೀರ್ಷಿಕೆಯಿದ್ದಂತೆ !
ಮುಖವಾಡ ಹಾಕಿದರೂ, ಕಣ್ಣ್ಗಳೇ ಸಾಕು ಓದಿ ತಿಳಿಯಲು ನೀನ್ಯಾರು ಎಂದು !!



-
ಗುರುರಾಜ ದೇಸಾಯಿ  (ವಚನ ಬ್ರಹ್ಮ)



ಬುಧವಾರ, ಜುಲೈ 21, 2021

ನನ್ನದ್ಯಾವುದು

ಇಲ್ಲಿ ಯಾವುದು ನೈಜ ಪ್ರೀತಿಯೆಂದು ಭಾವಿಸಲಿ 
ಕಾಂಚಾಣವೆಂಬ ಮಾಯೆಯಿಂದ ಎಲ್ಲವನ್ನೂ ತೂಗುತಿರಲು 
ಈ  ಮುಗ್ಧ ಮನಸ್ಸುಗಳ ನಾ ಹೇಗೆ ತಿದ್ದಲಿ 
ನನ್ನವರೆಂಬ ಭ್ರಮೆ ಅಂಟಿಕೊಂಡಿರಲು 

ಇಲ್ಲಿ ನಾನು ನನ್ನವರೆಂದು ಹೇಗೆ ನಂಬಲಿ 
ಎಲ್ಲರೂ ಬೆನ್ನಿಗೆ ಚೂರಿ ಇರಿಯುತಿರಲು 
ಈ ಬೆತ್ತಲೆ ಜಗಕೆ ನಾ ಹೇಗೆ ಬಟ್ಟೆ ತೊಡಿಸಲಿ 
ದಗಾ, ವಂಚನೆಗಳೆಂಬ ರೋಗ ಮೆತ್ತಿಕೊಂಡಿರಲು 

ಇಲ್ಲಿ ಯಾವುದು ನನ್ನದೆಂದು ಹೇಗೆ ಗುರುತಿಸಲಿ
ಸಂಶಯವೆಂಬ ಭೂತ ಸುತ್ತಿಕೊಂಡಿರಲು  
ಈ ಕತ್ತಲೆ ಜಗದಲಿ ನಾ ಹೇಗೆ ಬೆಳಕು ಚೆಲ್ಲಲಿ 
ಅಂಧಕಾರವೆಂಬ ಕಾರ್ಮೋಡ  ಕವಿದಿರಲು 

-
ಗುರುರಾಜ ದೇಸಾಯಿ  (ವಚನ ಬ್ರಹ್ಮ) 

ಶುಕ್ರವಾರ, ಮಾರ್ಚ್ 5, 2021

ಈ. ವಿ. ಎಂ(ಬ) ಭೂತ


ದೇಶದ್ರೋಹ ಎಸಗಿ ಗಲ್ಲು ಶಿಕ್ಷೆಗೆ ಗುರಿಯಾದವನಿಗಾಗಿ,
ಮಧ್ಯ ರಾತ್ರಿಯಲ್ಲಿ ಬಾಗಿಲು ಬಡಿಯುವ ಪ್ರತಿಪಕ್ಷಗಳೇ,
ನಮ್ಮ ಕಾನೂನು ವ್ಯವಸ್ಥೆಯ ಮೇಲೆ ನಿಮಗೇಕೆ ಅಪನಂಬಿಕೆ!

ಗಡಿಯಿಂದ ಒಳನುಸುಳಿ ಬಂದವರಿಗಾಗಿ,
ಕಾನೂನು ಸೌಲಭ್ಯ ಕೊಡಲು ಮುನ್ನುಗ್ಗುವ ಪ್ರತಿಪಕ್ಷಗಳೇ,
ದೇಶದ ನಾಗರಿಕರ ಮೇಲೆ ನಿಮಗೇಕೆ ಅಪನಂಬಿಕೆ!

370 ಪರಿಚ್ಚೇದ ವಿರೋಧಿಸುವ ನಾಯಕರಿಗಾಗಿ,
ನೈತಿಕ ಬೆಂಬಲ ಘೋಷಿಸುವ ಪ್ರತಿಪಕ್ಷಗಳೇ,
ದೇಶವನ್ನು ಒಗ್ಗೂಡಿಸುವ ನಿರ್ಧಾರದ ಮೇಲೆ ನಿಮಗೇಕೆ ಅಪನಂಬಿಕೆ!

ದೇಶವನ್ನು ಒಡೆಯುವ ಘೋಷಣೆ ಕೂಗಿದ ದೇಶದ್ರೋಹಿ ಯುವಕರಿಗಾಗಿ,
ಅಂಥವರ ಪ್ರತಿಭಟನೆಗಳಲ್ಲಿ ಭಾಗಿಯಾಗುವ ಪ್ರತಿಪಕ್ಷಗಳೇ,
ನಮ್ಮ ಸಾರ್ವಭೌಮತ್ವದ ಮೇಲೆ ನಿಮಗೇಕೆ ಅಪನಂಬಿಕೆ!

ತೆರಿಗೆ ವಂಚನೆ ಮಾಡುವವರ ಬೆಂಬಲಿಸಿ,
ಸರ್ಕಾರ ರಾಜಕೀಯ ಪಿತೂರಿ ಮಾಡುತ್ತಿದೆ ಎನ್ನುವ ಪ್ರತಿಪಕ್ಷಗಳೇ,
ನಮ್ಮ ಅಭಿವೃದ್ಧಿಗಾಗಿ ಶ್ರ್ರಮಿಸುವ ತೆರಿಗೆ ಇಲಾಖೆಯ ಮೇಲೆ ನಿಮಗೇಕೆ ಅಪನಂಬಿಕೆ!

ರೈತರ ಹೆಸರ ಮೇಲೆ ಜನಜೀವನ ಹಾಳುಗೆಡವುವ, 
ಪಟ್ಟ ಭದ್ರ ಹಿತಾಸಕ್ತಿಗಳ ಬೆಂಬಲಿಸುವ ಪ್ರತಿಪಕ್ಷಗಳೇ,
ಬಡವರ ಬಾಳು ಹಸನು ಮಾಡುವ ಕಾನೂನಿನ ಮೇಲೆ ನಿಮಗೇಕೆ ಅಪನಂಬಿಕೆ!

ಮೀಸಲಾತಿಯ ಹೆಸರಲ್ಲಿ ಜಾತಿ ರಾಜಕಾರಣ ಮಾಡಿ,
ನಾವು ಜಾತ್ಯತೀತರೆಂದು ಹೇಳಿಕೊಳ್ಳುವ ಪ್ರತಿಪಕ್ಷಗಳೇ,
ಜನರ ಬುದ್ಧಿವಂತಿಕೆ ಮೇಲೆ ನಿಮಗೇಕೆ ಅಪನಂಬಿಕೆ!

ಬಾಯಿಗೆ ಬಂದಂತೆ ಜನ ವಿರೋಧಿ ಹೇಳಿಕೆ ಕೊಟ್ಟು, 
ಮೂಲಭೂತವಾದಿ, ನಕ್ಸಲ್, ದೇಶ ವಿರೋಧಿಗಳ ಪರ ಮಾತನಾಡುವಂತೆ ಭಾಸವಾಗುವ ಪ್ರತಿಪಕ್ಷಗಳೇ,
ಈ ವಿ ಎಂ ಯಂತ್ರಗಳ ಮೇಲೆ ನಿಮಗೇಕೆ ಅಪನಂಬಿಕೆ!

---

ನೀವು ಮಾಡುವದನ್ನು ಜನ ನೋಡಿ, ಅವಲೋಕಿಸಿ, ನಿರ್ಧರಿಸಿ ಮತದಾನ ಮಾಡಿದಾಗಲೇ ನಿಮ್ಮ ಸೋಲಾಗುತ್ತಿರುವುದೇ ಹೊರತು,
ಈ ವಿ ಎಂ ಯಂತ್ರಗಳ ತಾಂತ್ರಿಕ ದೋಷಗಳಿಂದಲ್ಲ!!!

ಇದನ್ನು ಅರಿತು ತಿದ್ದಿಕೊಂಡರೆ ರಚನಾತ್ಮಕ ಪ್ರತಿಪಕ್ಷ ಎಂದೆನಿಸಿಕೊಂಡು ಮುಂದೊಂದು ದಿನ ಜನರ ಸೇವೆ ಮಾಡುವ ಅವಕಾಶ ದೊರೆಯಬಹುದು!!!

-

ಗುರುರಾಜ್ ದೇಸಾಯಿ
ಅನಿವಾಸಿ ಭಾರತೀಯ, ಕ್ಯಾಲಿಫೋರ್ನಿಯಾ   



ಮಂಗಳವಾರ, ಜನವರಿ 19, 2021

ಗಂಟು ಮೂಟೆ

ಹೊತ್ತು ಪದವಿ ಎಂಬ ಬಂಡವಾಳವ 

ದೂರದೂರಿಗೆ ಹೊರಟೆ ಕಟ್ಟಿ ಗಂಟು ಮೂಟೆ!

ಹೊತ್ತು ಆಸೆ ಎಂಬ ಹಂದರವ
ತಿರುಗಿಸುತ ಸಾಗಿದೆ ಕಾಯಕದ ರಾಟೆ!

ಹೊತ್ತು ಹಠವೆಂಬ ಛಲವ
ಆಡುತ ಸಾಗಿದೆ ವೃತ್ತಿಯ ಬೇಟೆ!

ಹೊತ್ತು ಟೊಳ್ಳು ಕಲ್ಲು ಹೃದಯವ!
ಹೊಡೆಯದೇ ಸಾಗಿದೆ ಸರಳತೆಯೆಂಬ ರಂಟೆ!

ಹೊತ್ತು ವಿಲಾಸಿ ಜೀವನ ಶೈಲಿಯ
ಬಾರಿಸುತ ಸಾಗಿದೆ ಅಹಂಕಾರ ಎಂಬ ಜಾಗಟೆ!

ಹೊತ್ತು ಕಣ್ಣಿಗೆ ಬಣ್ಣದ ಕನ್ನಡಕವ
ತೀರಿಸಿಕೊಳ್ಳುತ ಸಾಗಿದೆ ಅಜ್ಞಾನವೆಂಬ ತೀಟೆ!

ಹೊತ್ತು ಸಾಲವೆಂಬ ಭೂತವ
ಕಳೆಯುತ ಸಾಗಿದೆ ಕೂಡಿಟ್ಟ ಹೊನ್ನ ಕುಡಿಕೆ!

ಹೊತ್ತು ನಿರುಪಯೋಗಿ ದೇಹವ
ತುತ್ತು ಅನ್ನಕ್ಕಾಗಿ ಸುತ್ತುತ್ತಿರುವೆ ಊರ ಪೇಟೆ!!



- ಗುರುರಾಜ್ ದೇಸಾಯಿ