ಬುಧವಾರ, ಜುಲೈ 21, 2021

ನನ್ನದ್ಯಾವುದು

ಇಲ್ಲಿ ಯಾವುದು ನೈಜ ಪ್ರೀತಿಯೆಂದು ಭಾವಿಸಲಿ 
ಕಾಂಚಾಣವೆಂಬ ಮಾಯೆಯಿಂದ ಎಲ್ಲವನ್ನೂ ತೂಗುತಿರಲು 
ಈ  ಮುಗ್ಧ ಮನಸ್ಸುಗಳ ನಾ ಹೇಗೆ ತಿದ್ದಲಿ 
ನನ್ನವರೆಂಬ ಭ್ರಮೆ ಅಂಟಿಕೊಂಡಿರಲು 

ಇಲ್ಲಿ ನಾನು ನನ್ನವರೆಂದು ಹೇಗೆ ನಂಬಲಿ 
ಎಲ್ಲರೂ ಬೆನ್ನಿಗೆ ಚೂರಿ ಇರಿಯುತಿರಲು 
ಈ ಬೆತ್ತಲೆ ಜಗಕೆ ನಾ ಹೇಗೆ ಬಟ್ಟೆ ತೊಡಿಸಲಿ 
ದಗಾ, ವಂಚನೆಗಳೆಂಬ ರೋಗ ಮೆತ್ತಿಕೊಂಡಿರಲು 

ಇಲ್ಲಿ ಯಾವುದು ನನ್ನದೆಂದು ಹೇಗೆ ಗುರುತಿಸಲಿ
ಸಂಶಯವೆಂಬ ಭೂತ ಸುತ್ತಿಕೊಂಡಿರಲು  
ಈ ಕತ್ತಲೆ ಜಗದಲಿ ನಾ ಹೇಗೆ ಬೆಳಕು ಚೆಲ್ಲಲಿ 
ಅಂಧಕಾರವೆಂಬ ಕಾರ್ಮೋಡ  ಕವಿದಿರಲು 

-
ಗುರುರಾಜ ದೇಸಾಯಿ  (ವಚನ ಬ್ರಹ್ಮ)